ಸೂರಿಕುಮೇರಿ ಕೆ. ಗೋವಿಂದ ಭಟ್ಟರ 'ಆತ್ಮ ವೃತ್ತಾಂತ'ವನ್ನು ಅವರು ಹಾಕಿ ಕೊಟ್ಟ ಟಿಪ್ಪಣಿಯ ಆಧಾರದಿಂದ ಯಕ್ಷೋಪಾಸನೆ ಎಂಬ ಗ್ರಂಥ ರೂಪಕ್ಕಿಳಿಸಿದ ಡಾ. ಬಿ. ಪ್ರಭಾಕರ ಶಿಶಿಲ ಮತ್ತು ಈ ಗ್ರಂಥದ ಪ್ರಕಾಶಕರಾದ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ ಇವರಿಗೆ ನನ್ನ ನಮನಗಳು. ಇನ್ನೂರ ಐವತ್ತೆರಡು ಪುಟಗಳ ಈ ಗ್ರಂಥವನ್ನು ಪ್ರತಿಯೊಬ್ಬ ಯಕ್ಷಗಾನ ಕಲಾವಿದ(ನಿಜ ಅರ್ಥದಲ್ಲಿ) ರಾಗ ಬಯಸುವವರು ಕೊಂಡು ಓದಲೇಬೇಕು. ಏಕೆಂದರೆ ಒಬ್ಬ ಸರ್ವಶ್ರೇಷ್ಠ ಕಲಾವಿದನಾಗಲು ಎಷ್ಟು ಕಷ್ಟವಿದೆ ಎಂಬುದನ್ನು ಈ ಗ್ರಂಥ ಓದಿದಾಗ ಮನದಟ್ಟಾಗುತ್ತದೆ. ಪ್ರತಿಯೊಬ್ಬ ಯಕ್ಷಗಾನ ಪ್ರೇಮಿ ಸಂಗ್ರಹಿಸಿಟ್ಟು ಓದಲೇಬೇಕಾದಂಥಹ ಗ್ರಂಥವಿದು.
'ಯಕ್ಷೋಪಾಸನೆ' ಕೃತಿಯನ್ನು ಆದ್ಯಂತವಾಗಿ ಓದಿ ಮುಗಿಸಿದೆ. ಓದುತ್ತಾ ಹೋದ ಹಾಗೆ ಪ್ರಾರಂಭದ 23 ಪುಟಗಳನ್ನು ಓದುವಾಗ ಕಣ್ಣಿನಿಂದ ನೀರು ಧಾರಾಕಾರವಾಗಿ ಹರಿಯುತ್ತಿತ್ತು.ಎಷ್ಟು ಪ್ರಯತ್ನಪಟ್ಟರೂ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಗುತ್ತಿರಲಿಲ್ಲ. ಏಕೆಂದರೆ ತೆಂಕುತಿಟ್ಟಿನ ಸರ್ವಶ್ರೇಷ್ಠ ಕಲಾವಿದರಲ್ಲಿ ಒಬ್ಬರಾದ ಸೂರಿಕುಮೇರಿ ಕೆ. ಗೋವಿಂದ ಭಟ್ಟರ ಜೀವನದ ಪ್ರಾರಂಭಿಕ ಬದುಕನ್ನು ಅರ್ಥವಿಸಿದಾಗ ಯಾವ ಕಲಾವಿದನಿಗೂ ಈ ರೀತಿಯ ಬಡತನ, ಕಷ್ಟ, ಅವಮಾನ ಬಾರದಿರಲಿ ಎಂಬುದಾಗಿ ನನ್ನ ಮನಸ್ಸು ಹೇಳುತ್ತಿತ್ತು.
ಓದುತ್ತಾ ಹೋದ ಹಾಗೆ ಎಲ್ಲವನ್ನು ಕಳಕೊಂಡ ನಳರಾಜ(ಬಾಹುಕ), ಪಾಪಣ್ಣ ವಿಜಯದ ಪಾಪಣ್ಣ, ಹೆಂಡತಿ ಮಗನನ್ನು ಕಳಕೊಂಡ ಸತ್ಯಹರಿಶ್ಚಂದ್ರ, ಹೆಂಡತಿ ಮಕ್ಕಳೊಂದಿಗೆ ಊಟ ದಕ್ಷಿಣೆಗಾಗಿ ದಕ್ಷನಯಾಗಕ್ಕೆ ಹೋಗುವ ಬಡ ಬ್ರಹ್ಮಣನ ನೆನಪಾಗುತ್ತಿತ್ತು.
ಗೋವಿಂದ ಭಟ್ಟರ ಬಾಲ್ಯದ ಬಡತನದ ಚಿತ್ರಣವನ್ನು ಓದಿದಾಗ, ಕಿತ್ತು ತಿನ್ನುವ ಬಡಹವ್ಯಕ ಬ್ರಾಹ್ಮಣನ ಬಗ್ಗೆ ಓದುವಾಗ, ಬಾಲ್ಯದಲ್ಲಿ ಓದಿದ-ಕೇಳಿದ ಕಥೆಗಳು ಸುಳ್ಳಲ್ಲ ಎಂದೆನಿಸುತ್ತದೆ. ಅದೇನೆಂದರೆ, ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದ... ಎಂದು ಕಥೆ ಪ್ರಾರಂಭವಾಗುತ್ತದೆ. ಇಂತಹ ಕಥೆಗಳು ಆಶ್ಚರ್ಯವಲ್ಲ, ಸುಳ್ಳಲ್ಲ ಎಂಬುದು ಗೋವಿಂದ ಭಟ್ಟರ ಬಾಲ್ಯ ವೃತ್ತಾಂತವನ್ನು ಓದಿದಾಗ ಮನದಟ್ಟಾಗುತ್ತದೆ.
"ಬಡವರಿಗೆ ದೇವರು ಕೂಡ ಸಹಾಯ ಮಡುವುದಿಲ್ಲ", "ಗುರಿ ರಹಿತ ಅಲೆಮಾರಿ ಜೀವನ", "ಕೆಲವರು ಕಷ್ಟ ಪಡಲೆಂದೇ ಈ ಭೂಮಿಯಲ್ಲಿ ಜನಿಸಿರುತ್ತಾರೆ", "ದಿನವೂ ಊಟಕ್ಕೆ ಗತಿಯಿಲ್ಲದವರೆಂದು ಹಂಗಿಸುವುದು", "ತೆಂಗಿನ ಕಾಯಿ ಚೂರು ಹೆಕ್ಕಲು ಮುನ್ನುಗ್ಗಿ ಜನರ ಕಾಲ್ತುಳಿತಕ್ಕೆ ಸಿಕ್ಕಿದ್ದು", ರಥಕ್ಕೆಸೆಯುವಾಗ ಬಿದ್ದ ಬಾಳೆ ಹಣ್ಣನ್ನು ಹೆಕ್ಕಿ ತಿಂದು ಹಸಿವು ನೀಗಿಸಿಕೊಂಡದ್ದು", "ತೊತ್ತಿನ ಊಟಕ್ಕಾಗಿ ಹರಿಕತೆ ಕೇಳುವಂತೆ ನಟಿಸಿದ್ದು", "ಮಾವಂದಿರು ಮನೆಯೊಳೆಗಿನಿಂದ ವಸ್ತುಗಳನ್ನು ಅಂಗಳಕ್ಕೆಸೆದು ಮನೆಯಿಂದ ಹೊರಹಾಕಿದ್ದು", "ಮಾವ ತಂದೆಯವರ ಗಲಾಟೆಯಲ್ಲಿ ತಂದೆಯವರ ಕೈ ಮುರಿದದ್ದು!", "ತೀವ್ರ ಬಡತನದಿಂದ ಅಪ್ಪ ಅಮ್ಮ ಹುಚ್ಚರಾಗದಿದದ್ದು!", "ಅಪ್ಪನ ಚಿಕಿತ್ಸೆಗಾಗಿ ವೈದ್ಯರಿಗೆ ಕೊಡಲು ಹಣವಿಲ್ಲದೆ ತಾಯಿಯ ಬೆಂಡೋಲೆ, ಕುತ್ತಿಗೆಯ ಕರಿಮಣಿ ತೆಗೆದು ಮಾರಿದ್ದು", "ಒಪ್ಪತ್ತು ಊಟಕ್ಕೂ ತತ್ವಾರವಾದಾಗ ಹೈಸ್ಕೂಲು ಶಿಕ್ಷಣಕ್ಕೆ ತಿಲಾಂಜಲಿ", ಊಟಕ್ಕಿಲ್ಲದಾಗ ನೂಜಿ ತಿಮ್ಮಣ್ಣ ಭಟ್ಟರಲ್ಲಿ ಹೋಗಿ ತನ್ನ ಗೋಳಿನ ಕತೆ ಹೇಳಿ ಗೋಳೋ ಎಂದು ಅತ್ತದ್ದು", "ತಾಮ್ರ, ಹಿತ್ತಳೆ ಮತ್ತು ಅಜ್ಜನ ಮನೆಯಲ್ಲಿ ಉಳಿದಿದ್ದ ಏಕೈಕ ತಾಮ್ರದ ಹಂಡೆ ಮಾರಟ ಮಾಡಿ ಏಳು ಸೇರು ಅಕ್ಕಿ ತಂದದ್ದು", ತೀರಾ ಚಳಿಯಾದಾಗ ಗೋಣಿಯೊಳಗೆ ನುಗ್ಗಿಕೊಂಡು ತಲೆ ಮಾತ್ರ ಹೊರಗೆ ಕಾಣುವಂತೆ ನಿದ್ರಿಸುತ್ತಿದ್ದದ್ದು", "ತಿಂಗಳಲ್ಲಿ ಹತ್ತು ದಿನ ಮಾತ್ರ ರಾತ್ರಿ ಊಟ ಮಾಡಿದ್ದು", - ಇಂತಹ ವಿಷಯವನ್ನು ಓದಿದಾಗ ಯಾರಿಗೆ ತಾನೆ ಹೃದಯಕರಗುವುದಿಲ್ಲ?
ಗೋವಿಂದ ಭಟ್ಟರು ತನಗೆ ಮಾತು ಬರುವ ಪ್ರಾಯದಿಂದ ಏಳನೆಯ ತರಗತಿಯ ತನಕ ನಡೆದು ಹೋದ ಘಟನೆಗಳನ್ನು ನೆನಪಿಟ್ಟು ಟಿಪ್ಪಣಿ ಬರೆದದ್ದೇ ಒಂದು ಸಾಧನೆ. ಈ ಟಿಪ್ಪಣಿಯನ್ನು ಆಧರಿಸಿ ಡಾ. ಶಿಶಿಲರು ವಿಸ್ತರಿಸಿ ಇಂದು ಗ್ರಂಥ ರೂಪ ಕೊಟ್ಟರು. ಒಂದು ಷಡ್ರಸ ಪಂಚ ಭಕ್ಷ್ಯಪರಮಾನ್ನದ ಭೋಜನದ ತಯಾರಿಗೆ ಬೇಕಾದ ಎಲ್ಲಾ ಪರಿಕರಗಳು ಗೋವಿಂದ ಭಟ್ಟರು ಟಿಪ್ಪಣಿ ಮಾಡಿಕೊಟ್ಟಿದ್ದಾರೆ. ಆ ಪರಿಕರಗಳನ್ನು ಎಲ್ಲೆಲ್ಲಿ ಎಷ್ಟೆಷ್ಟು ಬೇಕೋ ಅಷ್ಟಷ್ಟು ಯೋಚಿಸಿ ಒಂದು ಒಳ್ಳೆಯ ಷಡ್ರಸ ಭೋಜನ('ಯಕ್ಷೋಪಾಸನೆ')ವನ್ನು ನಮಗೆ ಉಣ ಬಡಿಸಿದ್ದಾರೆ.
ನನ್ನ ದೃಷ್ಟಿಯಲ್ಲಿ ಗೋವಿಂದ ಭಟ್ಟರು ಕಿತ್ತು ತಿನ್ನುವ ಬಡತನದಿಂದ ನಿರಾಶರಾಗದೆ, ಸಮ ಚಿತ್ತದಿಂದ ಛಲ ಬಿಡದೆ, ತ್ರಿವಿಕ್ರಮನಂತೆ ಯಕ್ಷಗಾನ ಕಲೆಗಾಗಿ ತನ್ನನ್ನು ತಾನು ದುಡಿಸಿಕೊಂಡು ಬದುಕಿದ್ದೇ ವಿಶೇಷ. ಇಂತಹವರು ಸಿಗುವುದೇ ಅಪರೂಪ.
ಕನ್ನಡ ವಿದ್ವಾನ್ ಪರೀಕ್ಷೆ ಕಟ್ಟಲು ತಯಾರು ಮಾಡಿದ ಪರಿಕರಗಳು ಮನೆಗೆ ಬೆಂಕಿ ಬಿದ್ದಾಗ ಸುಟ್ಟು ಹೋಯಿತು ಎಂದು ಬರೆದಿದ್ದಾರೆ. ಅದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ ಅವರು ವಿದ್ವಾನ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಶಾಲೆಯಲ್ಲಿ ಉಪಾಧ್ಯಾಯರಾಗುತ್ತಿದ್ದರು. ಇಂತಹ ತಾರಾ ಮೌಲ್ಯವಿರುವ ಶ್ರೇಷ್ಟ ಕಲಾವಿದನಾಗುತ್ತಿರಲಿಲ್ಲವೇನೋ.
ಗೋವಿಂದ ಭಟ್ಟರು ಬಾಲ್ಯದಲ್ಲಿ ಹೊಟ್ಟೆಪಾಡಿಗಾಗಿ ಅಷ್ಟು ಪರದಾಡದೆ ಇರುತ್ತಿದ್ದರೆ, ಆರ್ಥಿಕ ಮುಗ್ಗಟ್ಟು ಬಾರದೆ ಇರುತ್ತಿದ್ದರೆ, ನೆಂಟರಿಂದ ಸ್ನೇಹಿತರಿಂದ ಅವಮಾನಕ್ಕೆ ಒಳಗಾಗದೆ ಇರುತ್ತಿದ್ದರೆ, ಬಹುಶಃ ಇಷ್ಟು ದೊಡ್ಡ ಕಲಾವಿದನಾಗುತ್ತಿರಲಿಲ್ಲವೆನೋ. ಅದಕ್ಕೆ ಹೇಳುವುದು ಚಿನ್ನವನ್ನು ಸರಿಯಾಗಿ ಬೆಂಕಿಯಲ್ಲಿ ಕಾಯಿಸಿ ನಂತರ ಸುತ್ತುಗೆಯಿಂದ ಹೊಡೆದಾಗಲೇ ಹೊಳಪು ಬರುವುದು. ಅಂತಹ ಅಪ್ಪಟ ಚಿನ್ನ ಗೋವಿಂದ ಭಟ್ಟರು. ಅವರಂತಹ ಕಲಾವಿದರು ಸಾವಿರಕ್ಕೊಬ್ಬ ಸಿಗುವುದು ದುರ್ಲಭ. ಏಕೆಂದರೆ, ಅವರಂತಹ ಪ್ರೀತಿ, ವಿಶ್ವಾಸ, ಸ್ನೇಹ ಜೀವಿ, ನಿರುಪದ್ರವಿ ಕಲಾವಿದ ದುರ್ಬೀನು ಹಿಡಿದು ಹುಡುಕಿದರೂ ಸಿಗಲಾರದು.
ಗೋವಿಂದ ಭಟ್ಟರ ವಿವಿಧ ವೇಷಗಳ, ವಿವಿಧ ಭಂಗಿಯ ತೊಂಬತ್ತಕ್ಕೂ ಮಿಕ್ಕಿದ ಬಣ್ಣದ ಫೋಟೋಗಳು ಗ್ರಂಥದ ಮೌಲ್ಯ ಹೆಚ್ಚಿಸಿವೆ. ಕೃತಿ, ಆರಂಭದಿಂದ ಕೊನೆಯವರೆಗೂ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಸಂದರ್ಶನದಲ್ಲಿ ಅವರು ತನ್ನ ಮನದಂತರಾಳದ ಭಾವನೆಗಳನ್ನು ಬಾಲ್ಯದ ತುಂಟಾಟ, ನೋವು-ನಲಿವು, ಸಿಹಿ-ಕಹಿ ಘಟನೆಗಳನ್ನು ಮರೆಮಾಚದ ಎಲ್ಲವನ್ನು ಮನಬಿಚ್ಚಿ ಅಭಿವ್ಯಕ್ತಗೊಳಿಸಿದ್ದಾರೆ. "ಕಲಿಕೆಯು ಮನಸ್ಸಿಗೆ ನೀಡುವ ಸಂಸ್ಕಾರ ಮತ್ತು ದೇಹಕ್ಕೆ ನೀಡುವ ಉಲ್ಲಾಸದಿಂದ ಹೊಸ ವ್ಯಕ್ತಿಯಾಗಿ ಬಿಟ್ಟೆ" ಅವರ ಪ್ರಾಂಜಲ ಅಭಿಮತ ಇತರರಿಗೆ ಮಾರ್ಗದರ್ಶಿ. ಕಲಾವಿದರ ದುಃಸ್ಥಿತಿ, ಅನಿವಾರ್ಯತೆ, ಪರಿಸ್ಥಿತಿಯ ಒತ್ತಡ, ಆರ್ಥಿಕ ಮುಗ್ಗಟ್ಟು, ಭದ್ರತೆ ಇಲ್ಲದ ಜೀವನ ಅವರಿಂದ ಏನೇನನ್ನೋ ಮಾಡಿಸಿ ಬಿಡುತ್ತದೆ ಎಂಬುದನ್ನು ಅವರು ಸಹಜವಾಗಿ ಅರಿತುಕೊಂಡವರು.
ಮೇಳ ಬಿಟ್ಟು ಬಂದು ಬಿಡುತ್ತಿದ್ದರೆ ಅಡುಗೆಯ ಗೋವಿಂದ ಭಟ್ಟನಾಗುತ್ತಿದ್ದೆ. "ತಾಳಿದವನು ಬಾಳಿಯಾನು" ಸಹನೆಯಿಂದ ಮೇಳಕ್ಕೆ ಸೇರಿ ಸಂಸ್ಕಾರ ಬದಲಾಗಿ ಅನುಭವ ಶಿಕ್ಷಣ; ವ್ಯವಹಾರ ಜ್ಞಾನಕ್ಕೆ ಕಾರಣವಾಯಿತು ಎಂದು ಅವರು ಒಪ್ಪಿಕೊಳ್ಳುತ್ತಾರೆ. ಜೀವನದಲ್ಲಿ ಹಣ ಬರುತ್ತದೆ-ಹೋಗುತ್ತದೆ; ಹಣಕ್ಕಿಂತ ವಿಶ್ವಾಸ ಮತ್ತು ಮಾನವೀಯ ಮೌಲ್ಯಗಳು ಮುಖ್ಯವೆಂಬುದನ್ನು ಅವರು ಸುದೀರ್ಘಾವಧಿಯ ಜೀವನಾನುಭವದಿಂದ ಕಲಿತ ಪಾಠಗಳು ಮುಂದಿನ ಪೀಳಿಗೆಯ ಯುವ ಕಲಾವಿದರಿಗೆ ಸ್ಪೂರ್ತಿ ಹಾಗೂ ಮಾರ್ಗದರ್ಶನದಂತಿದೆ.
ಇಂತಹ ಒಬ್ಬ ಸ್ನೇಹ ಜೀವಿ ಕಲಾವಿದನ ಆತ್ಮಚರಿತ್ರೆಯನ್ನು ಒದಗಿಸಿಕೊಟ್ಟ ಗೋವಿಂದ ಭಟ್ಟರಿಗೆ, ಡಾ. ಪ್ರಭಾಕರ ಶಿಶಿಲರಿಗೆ, ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನಕ್ಕೆ, ಅಂದವಾಗಿ ಮುದ್ರಿಸಿದ ಮಂಜುಶ್ರೀ ಪ್ರಿಂಟರ್ಸ್ ಉಜಿರೆ, ಇವರಿಗೆಲ್ಲಾ ನನ್ನ ವೈಯಕ್ತಿಕ ಅಭಿನಂದನೆಗಳು. ಇದೇ ಸಂದರ್ಭದಲ್ಲಿ ಈ ವರ್ಷ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸೂರಿಕುಮೇರಿ ಕೆ. ಗೋವಿಂದ ಭಟ್ಟರಿಗೆ ನನ್ನ ವೈಯಕ್ತಿಕ ವಿಶೇಷ ಅಭಿನಂದನೆಗಳು.
Article published on "ಯಕ್ಷಪ್ರಭಾ" April 2009 by
ಪ್ರೊ. ಟಿ. ಶ್ರೀಕೃಷ್ಣ ಭಟ್,
Principal,
S.D.M. Residential PU College,Ujire.