Friday, May 22, 2009

ದಿ| ಬಲಿಪ ನಾರಾಯಣ ಭಾಗವತರ ಜೀವನದಲ್ಲಿ ನಡೆದ ಕೆಲವು ಸ್ವಾರಸ್ಯಕರ ಘಟನೆಗಳು...


1. ಅಂದು "ಕೃಷ್ಣ ಸಂಧಾನ" ಪ್ರಸಂಗ. ಕೌರವನ ಅರ್ಥಕ್ಕೆ ತಾನೆ ಸಮರ್ಥನೆಂಬ ಭಾವನೆ ಒಬ್ಬರಿಗಿತ್ತು. ಆದರೆ ಅಂದು ಮಹನೀಯರಿಗೆ ಸಂಜಯನ ಪಾತ್ರ ಕೊಡಲಾಗಿತ್ತು. ರೊಚ್ಚಿಗೆದ್ದ ಅವರು ಕೌರವನ ಅರ್ಥ ಹೇಳುವ ಬಡಪಾಯಿಯನ್ನು ಚೆನ್ನಾಗಿ ತಿಕ್ಕಿ ಸೋಲಿಸಬೇಕೆಂದು ತೀರ್ಮಾನಿಸಿದ್ದರು. ಕೌರವನು ಸಂಜಯನನ್ನು ಉಪಪ್ಲಾವ್ಯಕ್ಕೆ ಕಳಿಸುವ ಸಂದರ್ಭ. ಸಂಜಯನು ಕೌರವನೊಡನೆ ವಾಗ್ಯುದ್ಧವನ್ನು ಪ್ರಾರಂಭಿಸಿಯೇಬಿಟ್ಟನು. ಎಷ್ಟು ಹೊತ್ತಾದರೂ ಚರ್ಚೆ ಮುಗಿಯುವ ಲಕ್ಷಣ ಕಂಡುಬರಲಿಲ್ಲ. ಮುಂದಿನ ಪದಕ್ಕಾಗಿ ಬಲಿಪರು ತಾಳ್ಮೆಯಿಂದ ಕಾದು ಕುಳಿತರು. ಒಂದೆರಡು ಸಲ ವೀಳ್ಯಹಾಕಿದರು. ಶ್ರುತಿ ಬಾರಿಸಿ ಸೂಚನೆಯನ್ನೂ ಕೊಟ್ಟರು. ಏನು ಮಾಡಿದರೂ ಸಂಜಯನು ಜಗ್ಗುವಂತೆ ಕಾಣಲಿಲ್ಲ. ಕೊನೆಗೆ ಬಲಿಪರು ತಾರಕ ಸ್ವರದಲ್ಲಿ - "ನೂಕಿರೋ ಸಂಜಯನ.." ಎಂಬ ಪದವನ್ನು ಹೇಳಿ ಅಲ್ಲಿಂದಲ್ಲೇ ಸಂಜಯನು ಗಂಟುಕಟ್ಟಿ ಹೊರಡುವಂತೆ ಮಾಡಿದರು!


2. ಹಳೆ ಕ್ರಮದಲ್ಲಿ ಮಾತನಾಡುವ ಕೆಲವು ಅರ್ಥಧಾರಿಗಳಿಗೆ ಭಾಗವತರನ್ನು ಮಾತನಾಡಿಸುವ ಸಂಪ್ರದಾಯವಿತ್ತು. ಒಂದು ಸಲ ಕೇಳು ಮಣಿಯಾಣಿ ಎಂಬ ಹೆಸರಿನವರೊಬ್ಬರು, ಒಡ್ಡೋಲಗದ ಅರ್ಥ ಪ್ರಾರಂಭಿಸುವಾಗ ಗಂಭೀರ ಧ್ವನಿಯಿಂದ - "ಅಯ್ಯ ಭಾಗವತ, ಕೇಳು" ಎಂದು ಪ್ರಾರಂಭಿಸಿದರು. ಕೂಡಲೇ ಬಲಿಪರು ಅದೇ ಧ್ವನಿಯಿಂದ - "ಅಯ್ಯ ಕೇಳು, ಅದೇನು ಹೇಳುತ್ತಿಯೋ ಹೇಳು" ಎಂದು ಗರ್ಜಿಸಿದಾಗ ತಬ್ಬಿಬ್ಬಾದ ಕೇಳುವಿನ ಅರ್ಥ ಅಲ್ಲಿಗೇ ಮುಕ್ತಾಯವಾಯಿತು.


3. ಮಾತನಾಡುವುದಕ್ಕೆ ಪ್ರಾರಂಭಿಸುವಾಗ, ಅರ್ಥವನ್ನು ಯಾವ ಮಾತಿನಿಂದ ಹೇಗೆ ಆರಂಭಿಸಬೇಕೆಂದು ತಿಳಿಯದವರು ಹಲವರಿದ್ದಾರೆ. ಅಂಥವರು ಯಾವ ಅರ್ಥವೇ ಆಗಿರಲಿ, - "ಓಹೋಯ್.. ಏನಾಶ್ಚರ್ಯವಿದು..." ಎಂದು ಮೊದಲು ಮಾಡುತ್ತಾರೆ. ಕೂಡಲೇ ಬಲಿಪರು - " ಯಾವುದು ಸ್ವಾಮಿ? ನಾನು ಪದ ಹೇಳಿದ್ದೇ? ನೀವು ಅರ್ಥ ಹೇಳಿದ್ದೇ?" ಎಂದು ಕೇಳಿ ಅಂಥವರನ್ನು ಚೇಷ್ಟೆ ಮಾಡುತ್ತಿದ್ದರು!


ಮುಂದುವರಿಯುವುದು...


ಮೂಲ: ಪೆರ್ಲ ಕೃಷ್ಣ ಭಟರ "ಕಲಾತಪಸ್ವಿ"



1 comment:

  1. ಬಲಿಪ್ಪ ಶೈಲಿ ಅಂತೆ ಅವರ ಕ್ರಿಯಾ ಶೈಲಿ. ಕಲ ಜಗತ್ತು ಕಂಡ ಅದ್ಭುತ ವ್ಯಕ್ತಿ. ಅವರ ಬಗ್ಗೆ ಇನ್ನೂ ಹೆಚ್ಚು ಸ್ಮರಣೀಯ ಕಾರ್ಯಕ್ರಮ ಹಾಗು ತಿಳುವಳಿಕೆಯ ಪ್ರಸ್ತುತ ಕಾಲದಲ್ಲಿ ತೀರ ಅಗತ್ಯವಿದೆ.

    ReplyDelete